
ಮೈಸೂರು: “ಕಾಂತಾರಾ ಚಾಪ್ಟರ್ 1” ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಅವರು ಮೈಸೂರಿನ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ದೇವಿಯ ಆಶೀರ್ವಾದ ಪಡೆದ ಬಳಿಕ ಅವರು ಧಾರ್ಮಿಕ ಕಾರ್ಯಕ್ರಮಕ್ಕೂ ಹಾಜರಾಗಿದರು.
ರಿಷಭ್ ಶೆಟ್ಟಿಯವರನ್ನು ನೋಡಲು ದೇಗುಲದ ಬಳಿಗೆ ಅಭಿಮಾನಿಗಳು ಮುಗಿಬಿದ್ದು, ತಮ್ಮ ನೆಚ್ಚಿನ ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಮಾಧ್ಯಮದ ಮುಂದೆ ಮಾತನಾಡಿದ ರಿಷಭ್ ಶೆಟ್ಟಿ, “ಕಾಂತಾರಾ ಚಾಪ್ಟರ್ 1” ಚಿತ್ರದ ಯಶಸ್ಸಿಗೆ ಕನ್ನಡಿಗರೇ ಪ್ರಮುಖ ಕಾರಣ, ಈ ಕ್ರೆಡಿಟ್ ಅವರಿಗೆ ಸಲ್ಲಬೇಕು ಎಂದು ಹೇಳಿದರು.

ಅವರು ಮುಂದುವರಿದು, “ಈ ಸಿನಿಮಾ ಕೇವಲ ಕಥೆಗಾಗಿ ಮಾತ್ರ ಜನಪ್ರಿಯವಾಗಿಲ್ಲ. ಕರಾವಳಿಯ ಸಂಸ್ಕೃತಿ, ಸಂಪ್ರದಾಯ, ದೈವ ನಂಬಿಕೆ – ಇವುಗಳೇ ಚಿತ್ರದ ಹೃದಯ. ನಾನು ಚಿಕ್ಕಂದಿನಿಂದಲೂ ದೈವವನ್ನು ನಂಬಿದ್ದೇನೆ, ಆರಾಧಿಸಿದ್ದೇನೆ. ಅದೇ ಆಶೀರ್ವಾದದಿಂದ ಸಿನಿಮಾ ಯಶಸ್ವಿಯಾಗಿದೆ” ಎಂದು ಹೇಳಿದರು.
ದೈವದ ದೃಶ್ಯಗಳನ್ನು ತೋರಿಸುವ ವೇಳೆ ಗುರು ಹಿರಿಯರ ಮಾರ್ಗದರ್ಶನ ಪಡೆದಿದ್ದಾಗಿ ತಿಳಿಸಿದ್ದಾರೆ. “ದೈವದ ವಿಷಯದಲ್ಲಿ ಯಾರಿಗೂ ನೋವಾಗದಂತೆ ವಿಶೇಷ ಕಾಳಜಿ ವಹಿಸಿದ್ದೇವೆ. ದೈವದ ಹೆಸರಿನಲ್ಲಿ ಯಾರೂ ಹುಚ್ಚಾಟ ಮಾಡಬಾರದು” ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.
ರಿಷಭ್ ಶೆಟ್ಟಿ ಅವರು ಈಗ “ಜೈ ಹನುಮಾನ್” ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದು, ಇತ್ತೀಚೆಗಷ್ಟೇ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರನ್ನು ಕೋನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು.

