
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ತು ಬೀಚ್‌ನಲ್ಲಿ ಮಂಗಳವಾರ (ಅಕ್ಟೋಬರ್ 14) ಸಂಜೆ ಸಂಭವಿಸಿದ ದಾರುಣ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಮಿತ್ರರೊಂದಿಗೆ ಈಜಲು ತೆರಳಿದ್ದ ನಾಲ್ವರು ಮಕ್ಕಳಲ್ಲಿ ಮೂವರು ಸಮುದ್ರದ ಅಲೆಗಳಿಗೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರು ಸ್ಥಳೀಯ ನಿವಾಸಿಗಳಾದ ಸಂಕೇತ್ (16), ಸೂರಜ್ (15) ಮತ್ತು ಆಶೀಶ್ (14) ಎಂದು ಗುರುತಿಸಲಾಗಿದೆ. ಮೂವರ ಮೃ*ತದೇಹಗಳನ್ನು ಸ್ಥಳೀಯರು ಹಾಗೂ ಮೀನುಗಾರರ ಸಹಾಯದಿಂದ ಪತ್ತೆ ಹಚ್ಚಲಾಗಿದೆ.
ಮೃ*ತರಲ್ಲಿ ಒಬ್ಬರು ಪಿಯುಸಿ ವಿದ್ಯಾರ್ಥಿಯಾಗಿದ್ದು, ಇನ್ನಿಬ್ಬರು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು ಎಂದು ತಿಳಿದುಬಂದಿದೆ. ನಾಲ್ಕು ಮಂದಿ ಸ್ನೇಹಿತರು ಸಂಜೆ ವೇಳೆಗೆ ಸಮುದ್ರಕ್ಕೆ ಈಜಲು ತೆರಳಿದ್ದು, ಅಲೆಗಳ ತೀವ್ರತೆಗೆ ಸಿಲುಕಿ ಮೂವರು ತೀರಕ್ಕೆ ಮರಳಲಿಲ್ಲ. ಓರ್ವ ಬಾಲಕ ಮಾತ್ರ ಪಾರಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ಮಾಹಿತಿ ಲಭಿಸುತ್ತಲೇ ಬೈಂದೂರು ಪಿಎಸ್ಐ ತಿಮ್ಮೇಶ್ ನೇತೃತ್ವದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

