
ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯ ಮಾರ್ಗದರ್ಶಿ ಸೂಚನೆಗಳಂತೆ ಸ.ಪ.ಪೂ.ಕಾಲೇಜು, ಉಪ್ಪುಂದ ಪ್ರೌಢಶಾಲಾ ವಿಭಾಗ ಇಲ್ಲಿ ದಿನಾಂಕ 14/11/2025 ರ ಶುಕ್ರವಾರದಂದು ಪೋಷಕ- ಶಿಕ್ಷಕರ ಮಹಾಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ಸೌಲಭ್ಯಗಳು, ಬದಲಾದ ಎಸ್.ಎಸ್.ಎಲ್.ಸಿ. ಪರೀಕ್ಷಾ ಪದ್ಧತಿ ಕುರಿತು ಮಾಹಿತಿ ನೀಡಲಾಯಿತು. ಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ತಾಲೂಕು, ಜಿಲ್ಲೆ ಮತ್ತು ವಿಭಾಗ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು.ಈ ಮಹಾಸಭೆಯಲ್ಲಿ ಹಾಜರಿದ್ದ ಪೋಷಕರೊಂದಿಗೆ ಮಕ್ಕಳ ಶೈಕ್ಷಣಿಕ ಸಮಸ್ಯೆ ಮತ್ತು ಪ್ರಗತಿಯ ಕುರಿತು ಚರ್ಚಿಸಲಾಯಿತು.

ಈ ಸಭೆಯಲ್ಲಿ ಶಾಲಾ ಉಪ ಪ್ರಾಂಶುಪಾಲರಾದ ಶ್ರೀ ಚಂದ್ರಹಾಸ ಮಾಯಾಗೌಡ ಎಲ್ಲರನ್ನೂ ಸಭೆಗೆ ಸ್ವಾಗತಿಸಿದರು. ಅವರೊಂದಿಗೆ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರು ಶ್ರೀಮತಿ ಅಮೃತಾ ಶೆಟ್ಟಿ ಮತ್ತು ಎಲ್ಲಾ ಸದಸ್ಯರು ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಇಲಾಖಾವತಿಯಿಂದ ಸಭೆಯ ಮಾರ್ಗದರ್ಶಿಗಳಾಗಿ ಬಿ.ಆರ್.ಪಿ.ಶ್ರೀ ಮಂಜುನಾಥ ದೇವಾಡಿಗ ಭಾಗವಹಿಸಿ ಮಕ್ಕಳ ಹಕ್ಕುಗಳು ಮತ್ತು ಇಲಾಖೆಯ ಆಶಯಗಳ ಕುರಿತು ತಿಳಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಮೋಹನ್ ಚಂದ್ರ ಅವರು ಸಭೆಯ ಉದ್ಘಾಟನೆ ನೆರವೇರಿಸಿ ಶಾಲಾ ಮಕ್ಕಳ ಆರೋಗ್ಯ, ಸುರಕ್ಷತೆ ವಿಚಾರಗಳೊಂದಿಗೆ ಪೋಷಕರ ಜವಾಬ್ದಾರಿಯ ಕುರಿತು ಸಲಹೆ ನೀಡಿದರು.ಶಾಲಾ ಎಸ್.ಡಿ.ಎಂ.ಸಿ.ಯ ಪದ ನಿಮಿತ್ತ ಸದಸ್ಯರು ಮತ್ತು ಗ್ರಾಮ ಪಂಚಾಯತ್ ಸದಸ್ಯರೂ ಆದ ಶ್ರೀ ಶೇಖರ್ ಪೂಜಾರಿ ಅವರು ಶಾಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿಕೊಟ್ಟ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿ ಶುಭ ಹಾರೈಸಿದರು. ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಶ್ರೀಮತಿ ಅಮೃತಾ ಶೆಟ್ಟಿ ಅವರು ಶಾಲೆಯಲ್ಲಿ ನಡೆಸಲಾಗುವ ಶೈಕ್ಷಣಿಕ ಚಟುವಟಿಕೆಗಳಿಗೆ ಪೋಷಕರ ಸಹಕಾರವನ್ನು ಕೋರುತ್ತಾ ಕಾರ್ಯಕ್ರಮಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಸಭೆಯ ನಂತರ ಉಪಸ್ಥಿತರಿದ್ದ ಪೋಷಕರಿಗೆ ಶಾಲಾ ಮಕ್ಕಳೊಂದಿಗೆ ಸಿಹಿ ಭೋಜನ ವ್ಯವಸ್ಥೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಸಹಕರಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು
