
ಮುಂಬೈ: ಬಾಲಿವುಡ್‌ನ ಖ್ಯಾತ ನಟ ವಿವೇಕ್ ಒಬೆರಾಯ್ ಅವರು ನಟನೆ ಹಾಗೂ ಉದ್ಯಮ ಎರಡೂ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಪಡೆದವರು. ತೆರೆಗೆ ನೊಂದವರ ಕಷ್ಟ ನಿವಾರಣೆ ಮಾಡುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಇವರು, ಈಗ ನಿಜಜೀವನದಲ್ಲಿಯೂ ಹೀರೋ ಆಗಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ, ಅವರು ತಮ್ಮ ಮುಂದಿನ ‘ರಾಮಾಯಣ’ ಸಿನಿಮಾದ ಸಂಪೂರ್ಣ ಸಂಭಾವನೆಯನ್ನು ದಾನ ಮಾಡಲು ನಿರ್ಧರಿಸಿದ್ದಾರೆ.
ವಿವೇಕ್ ಒಬೆರಾಯ್ ಅವರು ತಮ್ಮ ಸಾಮಾಜಿಕ ಸೇವಾ ಮನೋಭಾವದಿಂದಲೇ ಹಿಂದೆಯೂ ಅನೇಕ ಜನರ ಜೀವನದಲ್ಲಿ ಬದಲಾವಣೆ ತಂದಿದ್ದರು. ಈ ಬಾರಿ ಅವರು ನಟಿಸುತ್ತಿರುವ ರಾಮಾಯಣ ಸಿನಿಮಾದ ಸಂಭಾವನೆಯನ್ನು ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ನೀಡುವುದಾಗಿ ಘೋಷಿಸಿದ್ದಾರೆ.
‘ಚಿಚೋರೆ’ ಮತ್ತು ‘ದಂಗಲ್’ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯಾಧಾರಿತ ಸಿನಿಮಾ ಈಗಾಗಲೇ ಚಿತ್ರೀಕರಣ ಹಂತದಲ್ಲಿದೆ. ವಿವೇಕ್ ಅವರು ಈ ಚಿತ್ರದಲ್ಲಿ ರಾವಣನ ಸಹೋದರ ವಿಭೀಷಣನ ಪಾತ್ರ ನಿರ್ವಹಿಸುತ್ತಿದ್ದಾರೆ.
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ಕಲಾವಿದರಿಗೆ ದೊಡ್ಡ ಮೊತ್ತದ ಸಂಭಾವನೆ ನಿಗದಿ ಮಾಡಲಾಗಿದೆ. ಆದರೆ ವಿವೇಕ್ ಒಬೆರಾಯ್ ಮಾತ್ರ,
“ಈ ಸಿನಿಮಾದ ಸಂಭಾವನೆ ಮೊತ್ತದಿಂದ ನಾನು ಒಂದು ಪೈಸೆಯನ್ನೂ ಸ್ವಂತಕ್ಕಾಗಿ ಬಳಸುವುದಿಲ್ಲ. ಆ ಹಣವನ್ನು ಕ್ಯಾನ್ಸರ್ ಮಕ್ಕಳ ಚಿಕಿತ್ಸೆಗೆ ನೀಡಲಿದ್ದೇನೆ,”
ಎಂದು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ.

“ನಮ್ಮ ದೇಶದ ಸಂಸ್ಕೃತಿಯನ್ನು ಸಾರುವ ಮಹಾಕಾವ್ಯ ರಾಮಾಯಣ ಸಿನಿಮಾದ ಭಾಗವಾಗಿರುವುದು ನನ್ನ ಪಾಲಿಗೆ ಹೆಮ್ಮೆಯ ವಿಷಯ. ನಟರಾದ ಯಶ್, ರಾಕುಲ್ ಪ್ರೀತ್ ಸಿಂಗ್, ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ನಿರ್ದೇಶಕ ನಿತೇಶ್ ತಿವಾರಿ ಅವರೊಂದಿಗೆ ಕೆಲಸ ಮಾಡುವುದು ಅತ್ಯಂತ ಸ್ಮರಣೀಯ ಅನುಭವ,”
ಎಂದು ಹೇಳಿದ್ದಾರೆ.
ರಾಮಾಯಣ ಚಿತ್ರವನ್ನು ನಿರ್ಮಿಸುತ್ತಿರುವವರು ನಮಿತ್ ಮಲ್ಹೋತ್ರಾ, ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಸಹ-ನಿರ್ಮಾಪಕರಾಗಿದ್ದಾರೆ. ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗವನ್ನು 2026ರ ದೀಪಾವಳಿಗೆ ತೆರೆಕಾಣಿಸಲು ಯೋಜಿಸಲಾಗಿದೆ.
ಚಿತ್ರದ ಪ್ರಮುಖ ಪಾತ್ರಗಳು:
- ರಾಮ – ರಣಬೀರ್ ಕಪೂರ್
- ಸೀತಾ – ಸಾಯಿ ಪಲ್ಲವಿ
- ರಾವಣ – ಯಶ್
- ವಿಭೀಷಣ – ವಿವೇಕ್ ಒಬೆರಾಯ್
- ಲಕ್ಷ್ಮಣ – ರವಿ ದುಬೆ
- ಮಂಡೋದರಿ – ಕಾಜಲ್ ಅಗರ್ವಾಲ್
- ಶೂರ್ಪಣಖಿ – ರಾಕುಲ್ ಪ್ರೀತ್ ಸಿಂಗ್
- ಹನುಮಂತ – ಸನ್ನಿ ಡಿಯೋಲ್
