
ಇತ್ತೀಚಿನ ದಿನದಲ್ಲಿ ಮದುವೆಯಾಗುವುದು ಬಳಿಕ ವೈಮನಸ್ಸು ಮೂಡಿದರೆ ಡಿವೋರ್ಸ್ ಪಡೆಯುವುದು ಸಾಮಾನ್ಯ ಸಂಗತಿಯಾಗಿದೆ. ಅದರಲ್ಲೂ ಸೆಲೆಬ್ರಿಟಿಗಳು ಚಿಕ್ಕ ಪುಟ್ಟ ಕಾರಣಕ್ಕೆಲ್ಲ ವಿಚ್ಛೇದನದ ಮೊರೆ ಹೋಗುತ್ತಿದ್ದಾರೆ. ಅಂತವರಲ್ಲಿ ಗಾಯಕ ರಘು ದೀಕ್ಷಿತ್ ಹಾಗೂ ನೃತ್ಯಗಾರ್ತಿ ಮಯೂರಿ ಜೋಡಿ ಕೂಡ ಒಂದು. ಅವರಿಬ್ಬರು ವಿಚ್ಛೇದನ ಪಡೆದು ಅನೇಕ ವರ್ಷವಾಗಿದೆ. ಇದೀಗ ಗಾಯಕ ರಘು ದೀಕ್ಷಿತ್ ಅವರು ತಮ್ಮ 50ನೇ ವಯಸ್ಸಿಗೆ ಖ್ಯಾತ ಗಾಯಕಿಯನ್ನು ಮದುವೆಯಾಗಲು ಮುಂದಾಗಿದ್ದಾರೆ. ಹಾಗಾದರೆ ಆ ಗಾಯಕಿ ಯಾರು?, ಇದಕ್ಕೆ ಮಾಜಿ ಪತ್ನಿ ಪ್ರತಿಕ್ರಿಯೆ ಏನು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ. ಗಾಯಕ ರಘು ದೀಕ್ಷಿತ್ ಅವರು ಕನ್ನಡ, ಹಿಂದಿ ಸೇರಿದಂತೆ ಪರಭಾಷೆಯಲ್ಲಿಯೂ ತಮ್ಮ ಅದ್ಭುತ ಗಾಯನದಿಂದ ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ಗಾಯಕರಾಗಿದ್ದಾರೆ. ಮೊದಲ ಪತ್ನಿಯಿಂದ ವಿಚ್ಛೇದನ ಪಡೆದು 6 ವರ್ಷಗಳ ಕಾಲ ಒಂಟಿ ಜೀವನ ಕಳೆದಿದ್ದಾರೆ. ಇದೀಗ ಅವರು ಗಾಯಕಿ, ಕೊಳಲು ವಾದಕಿ ವಾರಿಜಶ್ರೀ ವೇಣುಗೋಪಾಲ್ ಅವರನ್ನು ವಿವಾಹವಾಗಲು ಮುಂದಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗಿದೆ

ಈ ಬಗ್ಗೆ ಮಾಧ್ಯಮ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಗಾಯಕ ರಘು ದೀಕ್ಷಿತ್ ಅವರು ಮಾತನಾಡಿದ್ದು, ಜೀವನವನ್ನು ನಾನು ಒಂಟಿಯಾಗಿ ಕಳೆಯಲು ಬಯಸಿದ್ದೆನು. ಸಂಗೀತ, ಕಾರ್ಯಕ್ರಮದ ಮೂಲಕ ಅಭಿಮಾನಿಗಳನ್ನು ರಂಜಿಸಿ ಏಕಾಂಗಿಯಾಗಿರಬೇಕು ಎಂದು ಅಂದುಕೊಂಡಿದ್ದೆ. ನನ್ನ ಬದುಕಲ್ಲಿ ಇಂತಹ ಒಂದು ಕ್ಷಣ ಬರುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನಮ್ಮ ಪರಿಚಯ ಸ್ನೇಹದಿಂದ ಸಲುಗೆಯಾಗಿ ಪ್ರೀತಿ ಬಾಂಧವ್ಯವಾಯಿತು. ಹೀಗಾಗಿ ಅವರ ಪೋಷಕರು ಈ ಪ್ರೀತಿ ಒಪ್ಪುತ್ತಾರ ಎಂಬ ಭಯ ಇತ್ತು. ವಾರಿಜಶ್ರೀ ಅವರ ಪೋಷಕರು ಸಮ್ಮತಿಸಿದ್ದು ಅವರ ಆಶೀರ್ವಾದದೊಂದಿಗೆ ನಾವು ನಮ್ಮ ಜೀವನದ ಈ ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದೇವೆ… ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು ಕೂಡ ಬಹಳ ಖುಷಿ ತರಿಸಿದೆ ಎಂದು ರಘು ದೀಕ್ಷಿತ್ ಅವರು ಹೇಳಿಕೆ ನೀಡಿದ್ದಾರೆ. ಅವರು 2005ರಲ್ಲಿ ಡ್ಯಾನ್ಸ್ ಕೊರಿಯೊಗ್ರಾಫರ್ ಆದಂತಹ ಮಯೂರಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಬಳಿಕ ಅವರ ನಡುವೆ ಅನೇಕ ಕಾರಣಕ್ಕೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ. ಈ ನಡುವೆ ರಘು ದೀಕ್ಷಿತ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಸಹ ಕೇಳಿ ಬಂದಿತ್ತು. ಎಲ್ಲ ಭಿನ್ನಾಭಿಪ್ರಾಯ ಹೆಚ್ಚಾಗಿ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ 2019ವಿಚ್ಛೇದನ ಪಡೆದು ದೂರಾಗಿದ್ದಾರೆ. ರಘುದೀಕ್ಷಿತ್ ಎರಡನೇ ಮದುವೆ ಹೇಳಿಕೆ ಬೆನ್ನಲ್ಲೆ ಅವರ ಮಾಜಿ ಪತ್ನಿ ಮಯೂರಿ ಈ ಬಗ್ಗೆ ಏನು ಹೇಳಬಹುದು ಎಂಬ ಕುತೂಹಲ ಕೂಡ ಅಭಿಮಾನಿಗಳಿಗೆ ಮೂಡಿತ್ತು. ಆದರೆ ಅವರ ಮಾಜಿ ಪತ್ನಿ ಮಯೂರಿ ಈ ಬಗ್ಗೆ ಮೌನವಹಿಸಿದ್ದಾರೆ.

ವಾರಿಜಶ್ರೀ ಹಿನ್ನೆಲೆ ಏನು?
ವಾರಿಜಶ್ರೀ ವೇಣುಗೋಪಾಲ್ ಕೂಡ ಸಂಗೀತ ಹಿನ್ನೆಲೆಯುಳ್ಳವರಾಗಿದ್ದಾರೆ. ಬೆಂಗಳೂರು ಮೂಲದವರಾದ ಇವರು ಕರ್ನಾಟಿಕ್ ಸ್ಕ್ಯಾಟ್ ಸಿಂಗಿಂಗ್” ಕಲಾ ಪ್ರಕಾರ ಪರಿಚಯಿಸಿದ್ದ ಕೀರ್ತಿ ಕೂಡ ಇವರಿಗೆ ಸಲ್ಲುತ್ತದೆ. ಗ್ರ್ಯಾಮಿ ನಾಮನಿರ್ದೇಶಿತ ಭಾರತೀಯ ಗಾಯಕಿ, ಕೊಳಲುವಾದಕಿ ಎಂದು ಕೂಡ ಪ್ರಸಿದ್ಧಿ ಪಡೆದಿದ್ದಾರೆ. ಅಷ್ಟು ಮಾತ್ರವಲ್ಲದೆ ಡಾರ್ಲಿಂಗ್, ಟಗರು, ಆಚಾರ್ ಆ್ಯಂಡ್ ಕೋ, ಕಡಲ ತೀರ ಭಾರ್ಗವ ಇತರ ಸಿನಿಮಾಗಳಲ್ಲಿಯೂ ಕೂಡ ವಾರಿಜಶ್ರೀ ಹಾಡಿದ್ದಾರೆ. ಅದರ ಜೊತೆಗೆ ಲೈವ್ ಶೋ, ಆಲ್ಬಂ ಸಾಂಗ್ ಕೂಡ ಹಾಡಿ ಗಾಯನ ಕ್ಷೇತ್ರದಲ್ಲಿ ಸಾಧನೆ ಮಾಡಿ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೂ ಪಾತ್ರರಾಗಿದ್ದಾರೆ. ಇದೀಗ 34ವರ್ಷದ ವಾರಿಜಶ್ರೀ ಅವರು ತಮಗಿಂತ 16ವರ್ಷ ದೊಡ್ಡವರಾದ ಗಾಯಕ ರಘುದೀಕ್ಷಿತ್ ಅವರನ್ನು ವಿವಾಹವಾಗಲು ಒಪ್ಪಿಕೊಂಡಿದ್ದು ಅಕ್ಟೋಬರ್ ತಿಂಗಳ ಕೊನೆ ವಾರಕ್ಕೆ ಇಬ್ಬರು ಆಪ್ತರ ಸಮ್ಮುಖದಲ್ಲಿ ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ.
